● ನಿಮಗೆ ಗೊತ್ತೇ? ಭೌಗೋಳಿಕ ಅನ್ವೇಷಣೆಗಳಿಗೆ - ಕಾರಣ ಮತ್ತು ಪರಿಣಾಮಗಳು



ಭೌಗೋಳಿಕ ಅನ್ವೇಷಣೆಗಳು ಎಂದರೇನು?
15ನೆಯ ಶತಮಾನದವರೆಗೆ ಯೂರೋಪಿಯನ್ನರಿಗೆ ವಿಶ್ವದ ಎಲ್ಲ ಪ್ರದೇಶಗಳ ಪರಿಚಯವಿರಲಿಲ್ಲ. `ಭೂಮಿ ಚಪ್ಪಟೆಯಾಗಿದೆ' ಎಂಬ ನಂಬಿಕೆಯಿಂದ ವ್ಯಾಪಾರವೆಲ್ಲ ಯೂರೋಪಿನ ತೀರ ಪ್ರದೇಶದವರೆಗೆ ಮಾತ್ರವೇ ನಡೆಯುತ್ತಿತ್ತು. ಕ್ರಮೇಣ ಯುರೋಪಿಯನರು ತಮ್ಮ ಕುತೂಹಲ, ವ್ಯಾಪಾರಿ ಹಾಗೂ ಸಾಹಸಿ ಪ್ರವೃತ್ತಿಗಳಿಂದ ಹೊಸ ಭೂಭಾಗಗಳನ್ನು ಅನ್ವೇಷಣೆ ಮಾಡಿದರು. ಇದನ್ನು ಭೌಗೋಳಿಕ ಅನ್ವೇಷಣೆಗಳು (1488 ರಿಂದ 1519) ಎಂದು ಕರೆಯುವರು.

ಭೌಗೋಳಿಕ ಅನ್ವೇಷಣೆಗೆ ಕಾರಣವಾದ ಅಂಶಗಳು :
-> ಕಾನ್ಸ್ಟಂಟಿನೋಪಲ್ ನಗರದ ವಶ: ಕ್ರಿ.ಶ. 1453ರಲ್ಲಿ ಟರ್ಕರು ಏಕೈಕ ವ್ಯಾಪಾರ ಮಾರ್ಗವಾಗಿದ್ದ ಕಾನ್ಸ್ಟಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದರಿಂದ ಯುರೋಪಿಯನ್ನರ ವ್ಯಾಪಾರಕ್ಕೆ ಅಡ್ಡಿಯುಂಟಾಯಿತು. ಹೀಗಾಗಿ ಪೂರ್ವದ ಏಷ್ಯ ದೇಶಗಳಿಗೆ ಹೊಸ ಸಮುದ್ರ ಮಾರ್ಗ ಕಂಡುಹಿಡಿಯುವುದು ಅನಿವಾರ್ಯವಾಯಿತು.

-> ಮಾರ್ಕ್ ಪೊಲೊವಿನ ವರದಿ: ಏಷ್ಯಾದ ಭಾರತ ಮತ್ತು ಚೀನಾ ದೇಶಗಳಿಗೆ ಭೇಟಿ ನೀಡುವ ಹೆಬ್ಬಯಕೆ ಹೊಂದಿದ್ದ ಮಾರ್ಕ್ ಪೊಲೊ ತನ್ನ "ಪಶ್ಚಿಮ ದೇಶಗಳ ಯಾತ್ರೆ" ಎಂಬ ಕೃತಿಯಲ್ಲಿ ಏಷ್ಯಾದ ದೇಶಗಳು ಅಪಾರ ಸಂಪತ್ತಿನಿಂದ ಕೂಡಿವೆ ಎಂದು ನೀಡಿದ ಮಾಹಿತಿಯು ಯುರೋಪಿನ  ವ್ಯಾಪಾರಿಗಳಲ್ಲಿ ಆಸಕ್ತಿ ಮೂಡಿಸಿತು.

-> ಏಷ್ಯಾದ ಪದಾರ್ಥಗಳಿಗಿದ್ದ ಅಪಾರ ಬೇಡಿಕೆ: ಏಷ್ಯ ದೇಶಗಳ ಸರಕುಗಳು ಮತ್ತು ಸಾಂಬಾರು ಪದಾರ್ಥಗಳಿಗೆ (ಬೇಡಿಕೆಯಿದ್ದ ಭಾರತದ ವಸ್ತುಗಳೆಂದರೆ - ಕೇಸರಿ, ಸಾಗುವಾನಿ, ಹತ್ತಿ ಬಟ್ಟೆ, ಹುಣಸೆಹಣ್ಣು,  ಕರಿಮೆಣಸು, ಲವಂಗ, ದಾಲ್ಚಿನ್ನಿ, ಶ್ರೀಗಂಧ, ಕಸ್ತೂರಿ, ಏಲಕ್ಕಿ, ವಜ್ರ ಮತ್ತು ಜಾಯಪತ್ರೆ) ಯುರೋಪಿನಲ್ಲಿ ಭಾರಿ ಬೇಡಿಕೆಯಿತ್ತು.

-> ವೈಜ್ಞಾನಿಕ ಸಾಧನಗಳ ಆವಿಷ್ಕಾರಗಳು: ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ, ನಕ್ಷತ್ರೋನ್ನತಿ ಮಾಪಕ (ಆಸ್ಟ್ರೋಲ್ಯಾಬ್), ನಕ್ಷೆಗಳು ಮತ್ತು ಕ್ಯಾರವೆಲ್ ಎಂಬ ಬೃಹತ್ ಹಾಯಿಹಡಗುಗಳು ನಾವಿಕರಿಗೆ ಸಮುದ್ರಯಾನದಲ್ಲಿ ತೊಡಲು ಸಹಾಯಕವಾದವು.

-> ಧರ್ಮ ಪ್ರಸಾರದ ಪ್ರೇರಣೆ : ಕ್ರೈಸ್ತ ಮತ ಪ್ರಚಾರಕರು ತಮ್ಮ ಧರ್ಮವನ್ನು ಎಷ್ಯಾ ಮತ್ತು ಆಫ್ರಿಕಾದ ದೇಶಗಳತ್ತ ಪ್ರಚಾರಮಾಡುವಲ್ಲಿ ಆಸಕ್ತಿ ಹೊಂದಿದ್ದರು.

ಅನ್ವೇಷಣೆಗಳ ಹಾದಿ :
* ಸಮುದ್ರಯಾನ ಕಾರ್ಯವನ್ನು ಮೊದಲು ಕೈಗೊಂಡವರೆಂದರೆ - ಪೊರ್ಚುಗೀಸರು.
* ಭಾರತ ಮತ್ತು ಚೀನ ದೇಶಗಳಿಗೆ ಸಾಗರಮಾರ್ಗ ಕಂಡು ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಪೊರ್ಚುಗೀಸ್ ರಾಜಕುಮಾರ ಹೆನ್ರಿಯು `ಸ್ಕೂಲ್ ಆಫ್ ನಾವಿಗೇಶನ್' ಎಂಬ ನೌಕಾಶಾಲೆಯೊಂದನ್ನು ತೆರೆದು `ಹೆನ್ರಿ ದಿ ನ್ಯಾವಿಗೇಟರ್' ಎಂದೇ ಜನಪ್ರಿಯನಾಗಿದ್ದನು. ಪ್ರತಿವರ್ಷ ಆಫ್ರಿಕದ ಪಶ್ಚಿಮ ಕರಾವಳಿ ತೀರದುದ್ದಕ್ಕೂ ಈ ಶಾಲೆಯ ವತಿಯಿಂದ ಸಮುದ್ರಯಾನವನ್ನು ಕೈಗೊಳ್ಳಲಾಗುತ್ತಿತ್ತು.

ನಾವಿಕರಿಂದ ಶೋಧಿಸಲ್ಪಟ್ಟ ಪ್ರದೇಶಗಳು:
* ನಾವಿಕ ಬಾರ್ತಲೋಮಿಯೊ ಡಾಯಸ್ 1488ರಲ್ಲಿ ಆಫ್ರಿಕದ ದಕ್ಷಿಣದ ತುತ್ತ ತುದಿಯನ್ನು (ಕೇಪ್) ತಲುಪಿ ಆ ಪ್ರದೇಶವನ್ನು `ಕೇಫ್ ಆಫ್ ಸ್ಟಾರ್ಮ್' (ಬಿರುಗಾಳಿಯ ಭೂಶಿರ) ಎಂದು ಕರೆದನು. ಆದರೆ ರಾಜ 2ನೇ ಜಾನ್ ಆಫ್ರಿಕದ ದಕ್ಷಿಣ ತುದಿಯನ್ನು `ಭರವಸೆಯ ಭೂಶಿರ' (ಕೇಫ್ ಆಫ್ ಗುಡ್ ಹೋಪ್) ಎಂದು ಕರೆದನು.
* ವಾಸ್ಕೋಡಗಾಮನು ಡಾಯಸ್ ಮಾರ್ಗದಲ್ಲಿ ಹೊರಟು ಆಫ್ರಿಕದ ಪೂರ್ವತೀರದ ಮೆಲಿಂದಿ ದ್ವೀಪವನ್ನು ತಲುಪಿದನು. ಅಲ್ಲಿದ್ದ ಗುಜರಾತಿ ವ್ಯಾಪಾರಿಯ ಸಹಾಯದಿಂದ ಹಿಂದೂ ಮಹಾಸಾಗರ ಮತ್ತು ಅರಬ್ಬೀ ಸಮುದ್ರಗಳನ್ನು ದಾಟಿ 1498ರಲ್ಲಿ ಭಾರತದ ಪಶ್ಚಿಮ ತೀರದ ಕಲ್ಲಿಕೋಟೆಯಿಂದ ಸುಮಾರು 10ಕಿ.ಮೀ. ದೂರದಲ್ಲಿರುವ `ಕಾಪ್ಪಾಡ್' ಎಂಬ ಸ್ಥಳಕ್ಕೆ ಬಂದಿಳಿದನು. ಆಗ ಕಲ್ಲಿಕೋಟೆಯನ್ನು ಜಾಮೋರಿನ್ ದೊರೆಗಳು ಆಳುತ್ತಿದ್ದರು. ಹೀಗೆ ಭಾರತಕ್ಕೆ ಹೊಸ ಜಲಮಾರ್ಗದ ಅನ್ವೇಷಣೆಯಾಯಿತು. ನಂತರ ವಾಸ್ಕೋಡಗಾಮನು ಭಾರತದಿಂದ ತನ್ನ ದೇಶಕ್ಕೆ ಹಿಂದಿರುಗುವಾಗ ತನ್ನ ಸಮುದ್ರಯಾನದ ಒಟ್ಟು ವೆಚ್ಚದ 60 ಪಟ್ಟು ಮೌಲ್ಯದ ಸರಕುಗಳನ್ನು ಭಾರತದಿಂದ ಕೊಂಡೊಯ್ದನು.

* ಸ್ಪೇನ್ ದೇಶದ ನಾವಿಕ ಕ್ರಿಸ್ಟೋಫರ್ ಕೊಲಂಬಸ್ ನು ಅಟ್ಲಾಂಟಿಕ್ ಸಾಗರವನ್ನು ದಾಟಿ ಪಶ್ಚಿಮಾಭಿಮುಖವಾಗಿ ಭಾರತ ತಲುಪುವ ಗುರಿಯನ್ನಿಟ್ಟುಕೊಂಡು ಮೂರು ಹಡಗುಗಳಲ್ಲಿ 88 ಜನ ನಾವಿಕರೊಡನೆ 1492 ಆಗಸ್ಟ್ ನಲ್ಲಿ ಪಾಲೋಸ್ ಬಂದರಿನಿಂದ ಸಮುದ್ರಯಾನ ಆರಂಭಿಸಿದ. ಸುಮಾರು 02 ತಿಂಗಳ ಪ್ರಯಾಣ ಮಾಡಿದರೂ ಭೂಮಿ ಕಾಣಲಿಲ್ಲ. ಆಗ ಅವನ ಜೊತೆಗಿದ್ದ ನಾವಿಕರು ತಿರುಗಿ ಬಿದ್ದರು. ಇನ್ನು 3 ದಿನಗಳಲ್ಲಿ ಯಾರು ಮೊದಲು ಭೂಮಿಯನ್ನು ಕಾಣುವರೋ ಅವರಿಗೆ ಒಂದು ವರ್ಷದ ಸಂಬಳದ ಜೊತೆಗೆ ವಿಶೇಷ ಬಹುಮಾನ ಕೊಡಿಸುವುದಾಗಿ ಹೇಳಿ ಅವರನ್ನು ಹುರಿದುಂಬಿಸಿದನು. ಅದರಿಂದ ಸ್ಫೂರ್ತಿಗೊಂಡ ನಾವಿಕರು ಸಮುದ್ರಯಾನ ಮುಂದುವರಿಸಿ, ಕೊನೆಗೆ 1492 ಅಕ್ಟೋಬರ್ 12ರಂದು ಬೆಳಗಿನ ಸಮಯಕ್ಕೆ ಭೂಮಿಯನ್ನು ಕಂಡರು. ಆಶ್ಚರ್ಯವೆಂದರೆ ಅವನು ಸಾಯುವವರೆಗೂ ತಾನೊಂದು ಹೊಸ ಭೂಭಾಗವನ್ನು ಶೋಧಿಸಿದ್ದೇನೆಂದು ತಿಳಿದಿರಲಿಲ್ಲ.

* ಕ್ಯಾಪ್ಟನ್ ಪೆದ್ರೊ ಕೆಬ್ರಾಲ್ ಎಂಬಾತನ ನಾಯಕತ್ವದಲ್ಲಿ ಭಾರತದತ್ತ ಹೊರಟ ಪೊರ್ಚುಗೀಸ್ ನೌಕಾಪಡೆಯೊಂದು ಮಾರ್ಗಮಧ್ಯದಲ್ಲಿ ಭಾರೀ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ, ಅವರ ನೌಕೆಗಳು ದಾರಿತಪ್ಪಿ ಪಶ್ಚಿಮದತ್ತ ಸಾಗಿ ಆಕಸ್ಮಿಕವಾಗಿ ದಕ್ಷಿಣ ಅಮೆರಿಕದ ಈಗಿನ ಬ್ರೆಜಿಲ್ ಕಂಡುಹಿಡಿಯುವಂತಾಯಿತು.

* ಇಟಲಿಯ ಅಮೆರಿಗೊ ವೆಸ್ಪುಸಿಯು ಕಂಡುಹಿಡಿದ ಪ್ರದೇಶಕ್ಕೆ ಆತನ ನೆನಪಾಗಿ `ಅಮೆರಿಕ' ಎಂದು ಹೆಸರಿಸುವಂತೆ ಜರ್ಮನ್ ಭೂಗೋಳಶಾಸ್ತ್ರಜ್ಞ ಮಾರ್ಟಿನ್ ವಾಲ್ಡ್ ಸೀಮುಲ್ಲರ್ ಸಲಹೆ ಮಾಡಿದನು. ಅದೇ ಹೆಸರು ಮಾನ್ಯಗೊಂಡು ಅಂಗೀಕಾರವಾಯಿತು.
* ಪೊರ್ಚುಗೀಸ್ ಸಾಹಸಿ ನಾವಿಕ ಫರ್ಡಿನಾಂಡ್ ಮೆಗಲ್ ನು 1519ರಲ್ಲಿ 267 ಸಹಚರರೊಡನೆ ಸ್ಪೇನಿನಿಂದ 05 ಹಾಯಿಹಡಗುಗಳಲ್ಲಿ ಹೊರಟು ಮಾರ್ಗಮಧ್ಯದಲ್ಲಿ ಪಿಲಿಪೈನ್ಸ್ ದ್ವೀಪದ ಸ್ಥಳೀಯ ಜನರೊಡನೆ ನಡೆದ ಕದನದಲ್ಲಿ ಮರಣಹೊಂದಿದನು. ಆದರೆ ಆತನ ಬದುಕುಳಿದ ಸಹಚರರು `ವಿಕ್ಟೋರಿಯಾ' ಎಂಬ ಹಡಗಿನಲ್ಲಿ 1522ರಲ್ಲಿ ಸ್ವದೇಶಕ್ಕೆ ಮರಳಿದರು. ಇದರಿಂದಾಗಿ `ಭೂಮಿ ದುಂಡಾಗಿದೆ' ಎಂಬುದು ಸ್ಪಷ್ಟವಾಯಿತು. ನಂತರ ಮೆಗಲನ್ ದಾಟಿಹೋದ ಜಲಸಂಧಿಯನ್ನು `ಮೆಗಲ್ಲನ್ ಜಲಸಂಧಿ'ಯೆಂದೂ ಸಾಗರವನ್ನು ಪೆಸಿಫಿಕ್ (ಶಾಂತ) ಮಹಾಸಾಗರ ಎಂದೂ ಮುಂದೆ ಕರೆಯಲಾಯಿತು. ಹೀಗೆ ಪ್ರಪಂಚ ಪರ್ಯಟನೆ ಮಾಡಿದ ಮೊದಲ ಹಡಗು `ವಿಕ್ಟೋರಿಯಾ' ಆಯಿತು.

Post a Comment

0 Comments