⚫ ಲೇಖನ ಚಿಹ್ನೆಗಳು-ವ್ಯಾಕರಣ ಭಾಗ-5

ಲೇಖನ ಚಿಹ್ನೆಗಳು

    ನಾವು ಬರೆದ ವಿಚಾರಗಳು ಓದುಗರಿಗೆ ಸ್ಪಷ್ಟವಾಗಿ ಅರ್ಥವಾಗಲೆಂದು ಅಲ್ಲಲ್ಲಿ ಉಪಯೋಗಿಸುವ ಚಿಹ್ನೆಗಳಿಗೆ ಲೇಖನ ಚಿಹ್ನೆಗಳೆಂದು ಕರೆಯುವರು. ಬರವಣಿಗೆಯಲ್ಲಿ ಲೇಖನ ಚಿಹ್ನೆಗಳ ಪಾತ್ರ ಅತ್ಯಂತ ಮುಖ್ಯವಾದುದು. ಲೇಖನ ಚಿಹ್ನೆಗಳಿಲ್ಲದ ಬರವಣಿಗೆ ಸ್ಪಷ್ಟಾರ್ಥವನ್ನು ಕೊಡದೆ ತೊಡಕುಗಳಿಗೆ ಕಾರಣವಾಗುವುದುಂಟು. ಹಾಗಾಗಿ ಲೇಖನ ಚಿಹ್ನೆಗಳು ಅತ್ಯಂತ ಅಗತ್ಯ. ಒಟ್ಟು 9 ಲೇಖನ ಚಿಹ್ನೆಗಳಿವೆ. ಅವು-

1. ಪೂರ್ಣವಿರಾಮ ಚಿಹ್ನೆ (.)

2. ಅರ್ಧವಿರಾಮ ಚಿಹ್ನೆ (;)

3. ಅಲ್ಪ ವಿರಾಮ ಚಿಹ್ನೆ (,)

4. ಪ್ರಶ್ನಾರ್ಥಕ ಚಿಹ್ನೆ (?)

5. ಭಾವಸೂಚಕ ಚಿಹ್ನೆ (!)

6. ಉದ್ಧರಣ ಚಿಹ್ನೆ (‘ ') (“ '')

7. ಆವರಣ ಚಿಹ್ನೆ ( )

8. ಸಮಾನಾರ್ಥಕ ಚಿಹ್ನೆ (=)

9. ವಿವರಣ ಚಿಹ್ನೆ (: / :-)

  1)ಪೂರ್ಣ ವಿರಾಮ (.) :

 * ಒಂದು ಪೂರ್ಣಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಈ ಪೂರ್ಣವಿರಾಮ ಚಿಹ್ನೆಯನ್ನು ಬಳಸಬೇಕು.

* ಅರ್ಥಪೂರ್ಣವಾಕ್ಯದ ಕೊನೆಯನ್ನು ಸೂಚಿಸಲು ಬಳಸುವ ಚಿಹ್ನೆಯಾಗಿದೆ.

* ಅಂಕಿ, ಅಕ್ಷರಗಳನ್ನು ಒಂದೊದಾಗಿ ಪಟ್ಟಿ ಮಾಡುವಾಗ ಅಂಕಿ, ಅಕ್ಷರದ ನಂತರ ಪೂರ್ಣವಿರಾಮ ಹಾಕಬೇಕು. ಉದಾ: 1.ಅ. 2.ಇ. 3.ಉ.

* ಸಂಕ್ಷೇಪಗಳನ್ನು ಬಳಸುವಾಗ ಪ್ರತಿ ಸಂಕ್ಷೇಪಾಕ್ಷರದ ನಂತರ ಪೂರ್ಣ ವಿರಾಮ ಚಿಹ್ನೆ ಬಳಸುವುದು ವಾಡಿಕೆ. ಉದಾ-ಕ.ಸಾ.ಪ.(ಕನ್ನಡ ಸಾಹಿತ್ಯ ಪರಿಷತ್ತು) ಕ್ರಿ.ಪೂ.(ಕ್ರಿಸ್ತ ಪೂರ್ವ)

* ಕೆಲವು ಸಂಕ್ಷೇಪಗಳನ್ನು ಪೂರ್ಣವಿರಾಮವಿಲ್ಲದೇ ಬರೆಯುವುದೂ ರೂಢಿಯಲ್ಲಿದೆ. ಉದಾ:ಕುವೆಂಪು (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ) ವಿಸೀ (ವಿ.ಸೀತಾರಾಮಯ್ಯ) ಚಂಪಾ(ಚಂದ್ರಶೇಖರ ಪಾಟೀಲ) ಪಾಪು(ಪಾಟೀಲ ಪುಟ್ಟಪ್ಪ)

 2) ಅರ್ಧ ವಿರಾಮ(;) :

 * ಅನೇಕ ಉಪವಾಕ್ಯಗಳು ಒಂದು ಪ್ರಧಾನವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ ಈ ಚಿಹ್ನೆಯನ್ನು ಬಳಸಲಾಗುವುದು. ಉದಾ :- ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.

* ಇದು ಅಲ್ಪವಿರಾಮದಂತೆ ಬಳಕೆಯಾದರೂ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಬಳಕೆಯಾಗುತ್ತದೆ. ವಾಕ್ಯ ಅಥವಾ ವಾಕ್ಯಾಂಶ ದೊಡ್ಡ ವಾಕ್ಯವೊಂದರ ಭಾಗವಾಗಿದ್ದು, ಅರ್ಥಪೂರ್ಣತೆ ಹೊಂದಿ ಮುಂದುವರಿಯುವಂತಿದ್ದರೆ ಅಂತಹ ವಾಕ್ಯ ಅಥವಾ ವಾಕ್ಯಾಂಶದ ಅನಂತರ ಅರ್ಧವಿರಾಮ ಬಳಸುವುದು ರೂಢಿ. ಉದಾ: ಸಾಲುಮರದ ತಿಮ್ಮಕ್ಕ ಮರಗಳನ್ನು ಬೆಳೆಸಿದರು; ಈಗ ಅವರಿಗೆ ವಯಸ್ಸಾಗಿದೆ; ಮರವನ್ನು ನೋಡುವುದರಲ್ಲಿ ಅವರಿಗೆ ಸಂತೋಷ; ಮುಂದೆ ಹೀಗೆ ಮರಗಳನ್ನು ನೆಡುವವರು ಯಾರು ಎಂಬುದೇ ಯೋಚನೆ; ಮುಂದಿನ ಜನಾಂಗ ಈ ಬಗ್ಗೆ ಚಿಂತಿಸಬೇಕು.

3) ಅಲ್ಪವಿರಾಮ (,) :

* ಸಂಬೋಧನೆಯ ಮುಂದೆ ಹಾಗೂ ಕರ್ತೃ, ಕರ್ಮ, ಕ್ರಿಯಾಪದಗಳಿಗೆ ಬೇರೆ ಬೇರೆ ವಿಶೇಷಣಗಳು ಬರುವಾಗ ಕೊನೆಯ ವಿಶೇಷಣ ಬಿಟ್ಟು ಉಳಿದವುಗಳ ಮುಂದೆ ಅಲ್ಪವಿರಾಮ ಬಳಸಬೇಕು.

* ಮಾತಿನಲ್ಲಿ ಧ್ವನಿವಿರಾಮ ಇರುವ ಕಡೆ, ವಾಕ್ಯಗಳಲ್ಲಿ ಅರ್ಥಸ್ಪಷ್ಟತೆಗಾಗಿ, ದೀರ್ಘ ವಾಕ್ಯದಲ್ಲಿ ಅರ್ಥದ ಗೊಂದಲವನ್ನು ಹೋಗಲಾಡಿಸಲು, ಸರಿಯಾದ ಅರ್ಥ ತಿಳಿಯುವಂತೆ ಮಾಡಲು ಬಳಸುವ ಚಿಹ್ನೆ. ಉದಾ: ಬಲಮುರಿ ಪುಟ್ಟದಾದ, ಸುಂದರ, ಆಕರ್ಷಣೀಯ ಸ್ಥಳ.

* ಸಂಬೋಧನೆಯ ಅನಂತರ ಅಲ್ಪವಿರಾಮ ಚಿಹ್ನೆ ಬಳಸಬೇಕು.

ಉದಾ: ಮಾನ್ಯರೆ, ನಿಮ್ಮ ಪತ್ರ ತಲುಪಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ಬರೆಯಲು ಸಿದ್ಧರಾಗಿರಿ. ಬಟ್ಟೆಗಿರಣಿ, ರಟ್ಟು, ಪೆನ್ಸಿಲ್, ಬೆಂಕಿಕಡ್ಡಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲಾಗಿದೆ.

  4)ಪ್ರಶ್ನಾರ್ಥಕ (?) : 

* ಪ್ರಶ್ನೆರೂಪದ ಪದ ಮತ್ತು ವಾಕ್ಯಗಳ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸಲಾಗುವುದು.

* ಪ್ರಶ್ನಾರ್ಥಕ ವಾಕ್ಯದ ಕೊನೆಯಲ್ಲಿ ಬಳಸಬೇಕು. ಉದಾ : ನೀವು ಯಾರು? ನಿಮ್ಮ ಹೆಸರೇನು?

* ಪ್ರಶ್ನಾರ್ಥಕ ವಾಕ್ಯದ ರೂಪದಲ್ಲಿಲ್ಲದಿದ್ದರೂ ಅರ್ಥದ ದೃಷ್ಟಿಯಿಂದ ಪ್ರಶ್ನೆ ಅಡಕವಾಗಿದ್ದರೆ ಅಲ್ಲಿ ಪ್ರಶ್ನೆಸೂಚಕ ಬಳಸಬಹುದು.

* ಉದಾಹರಣೆಗೆ: ಜನವರಿಯಲ್ಲಿ ಏಳನೆಯ ತರಗತಿ ಪರೀಕ್ಷೆ? ದಶರಥ ಯಾರು ?

 5) ಭಾವಸೂಚಕ (!) :

* ಹರ್ಷ, ಆಶ್ಚರ್ಯ, ಸಂತೋಷ, ವಿಷಾದ, ದುಃಖ ಮುಂತಾದ ಭಾವನೆಗಳನ್ನು ಸೂಚಿಸುವ ಪದಗಳ ಮುಂದೆ ಈ ಚಿಹ್ನೆಯನ್ನು ಬಳಸಲಾಗುವುದು.

* ಸಂತೋಷ, ದುಃಖ, ಆಶ್ಚರ್ಯ, ಕೋಪ ಮುಂತಾದ ಭಾವನೆಗಳನ್ನು ಸೂಚಿಸುವ ಪದ ಅಥವಾ ವಾಕ್ಯದ ಕೊನೆಯಲ್ಲಿ ಭಾವಸೂಚಕ ಚಿಹ್ನೆ ಬಳಕೆಯಾಗುತ್ತದೆ.

* ಉದಾ: ಓ ಬನ್ನೀ,ಬನ್ನೀ ! ಹೌದಾ ! ಛೇ ! ಭಾರತದಲ್ಲಿ ಎಷ್ಟೊಂದು ಭಾಷೆಗಳು! ಅಯ್ಯೋ! ಹೀಗಾಗಬಾರದಿತ್ತು!

 6) ಉದ್ಧರಣ/ಜೋಡಿ ಉದ್ಧರಣ ಚಿಹ್ನೆ (“ ”) :

* ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಈ ಚಿಹ್ನೆಯನ್ನು ಬಳಸಲಾಗುವುದು.

* ನಮ್ಮ ಬರವಣಿಗೆಯಲ್ಲಿ ಮತ್ತೊಬ್ಬರ ಮಾತುಗಳನ್ನು ಬಳಸಿದಾಗ ಅವರ ಮಾತುಗಳನ್ನು ‘ಎಂದು’ ಎಂಬ ಪದದ ಸಹಾಯದಿಂದ ಅವರ ಮಾತುಗಳನ್ನು ಉದ್ಧರಿಸಬಹುದು. ಉದಾ: ದುಃಖ ಮತ್ತು ಸುಖದ ಬಗ್ಗೆ ಹೇಳುವಾಗ ‘ದುಃಖಕ್ಕೆ ಕಾರಣ ಸಿಕ್ಕಷ್ಟು ಬೇಗ ಸುಖಕ್ಕೆ ಕಾರಣ ಸಿಗುವುದಿಲ್ಲ’’ ಎಂದು ಸಾಹಿತಿ ಪಿ. ಲಂಕೇಶ್ ಅವರು ಹೇಳಿದ್ದಾರೆ.

 “ಶಿಕ್ಷಣವು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ದ ಹಕ್ಕಾಗಬೇಕು” ಎಂದು ಸರ್ ಎಂ. ವಿಶ್ವೇಶ್ವರಯ್ಯನವರು ಹೇಳಿದರು.

7) ವಾಕ್ಯವೇಷ್ಠನ/ಒಂಟಿ ಉದ್ಧರಣ ಚಿಹ್ನೆ (‘ ’) :

* ಪಾರಿಭಾಷಿಕ ಪದಗಳನ್ನು ಬಳಸುವಾಗ, ಅನ್ಯಭಾಷೆಯ ಪದಗಳನ್ನು ಬಳಸುವಾಗ, ಪ್ರಮುಖ ಪದಗಳನ್ನು ಸೂಚಿಸುವಾಗ ಈ ಚಿಹ್ನೆಯನ್ನು ಬಳಸಲಾಗುವುದು.

* ವಾಕ್ಯದಲ್ಲಿ ಯಾವುದಾದರೂ ಅಕ್ಷರ, ಪ್ರತ್ಯಯ, ಪದ, ಪದಪುಂಜವನ್ನು ವಿಶೇಷವಾಗಿ ಹೇಳಬೇಕಾದಾಗ ಒಂಟಿ ಉದ್ಧರಣ ಚಿಹ್ನೆ ಬಳಸಬೇಕು. ಇಲ್ಲಿ ‘ಇಂದ’ ಬಳಸಬಾರದು. ಉದಾ: ಶಾಲೆಯ ಮುಂದಿನ ರಸ್ತೆಯಲ್ಲಿ ‘ವೇಗವಾಗಿ ಚಲಿಸಬೇಡಿ’ ಎಂಬ ಫಲಕವನ್ನು ಅಳವಡಿಸಬೇಕು.

* ಬರವಣಿಗೆಯಲ್ಲಿ ವಿಷಯದ ಭಾಗವಾಗಿ ಬರುವ ವಿಶಿಷ್ಟ ಪದ, ಪದಪುಂಜ, ಲೇಖನ, ಪುಸ್ತಕ, ಪತ್ರಿಕೆ ಮುಂತಾದುವುಗಳನ್ನು ಒಂಟಿ ಉದ್ಧರಣ ಚಿಹ್ನೆಯೊಳಗೆ ಬರೆಯಬೇಕು. ಉದಾ: ‘ನೆನಪಿನ ದೋಣಿಯಲ್ಲಿ’ ಎಂಬ ‘ಆತ್ಮಕಥನದ ಕರ್ತೃ ಕುವೆಂಪುರವರು. ‘ಮಲೆಗಳಲ್ಲಿ ಮಧುಮಗಳು’, ’ಕಾನೂನು ಹೆಗ್ಗಡತಿ’ ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ.

* ಬರವಣಿಗೆಯಲ್ಲಿ ಯಾವುದಾದರೂ ಭಾಗವೊಂದನ್ನು ಅಳವಡಿಸಿದಾಗ ಅದರ ಪ್ರತ್ಯೇಕತೆ ಸೂಚಿಸಲು ಆ ಭಾಗವನ್ನು ಒಂಟಿ ಉದ್ಧರಣ ಚಿಹ್ನೆಯೊಳಗೆ ಬರೆಯಬೇಕು. ಉದಾ:‘ಭಾರತ ಜನನಿಯ ತನುಜಾತೆ’ಯಾದ ‘ಕರ್ನಾಟಕ ಮಾತೆ’ ಇಂದು ಭಾರತದ ಭೂಪಟದಲ್ಲಿ ತನ್ನದೇ ಆದ ವೈಶಿಷ್ಠ್ಯತೆಗಳಿಂದ ರಾರಾಜಿಸುತ್ತಿದ್ದಾಳೆ. ಕನ್ನಡ ಭಾಷೆಯಲ್ಲಿ ‘ಇಂಗ್ಲಿಷ್’, ‘ಪರ್ಷಿಯನ್’, ‘ಪೋರ್ಚುಗೀಸ್’ ಭಾಷೆಗಳ ಪದಗಳನ್ನು ಬಳಸಲಾಗುತ್ತದೆ.

 8) ಆವರಣ ಚಿಹ್ನೆ( ) :

ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮಾನಾರ್ಥಕ ಪದವನ್ನೋ ವಾಕ್ಯವನ್ನೋ ಹೇಳುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ. ಉದಾ :- ನೀರನ್ನು ವಿಭಜಿಸಿದರೆ ಆಮ್ಲಜನಕ (ಆಕ್ಸಿಜನ್) ಜಲಜನಕ (ಹೈಡ್ರೋಜನ್)ಗಳು ಉತ್ಪತ್ತಿಯಾಗುತ್ತವೆ.

 9) ವಿವರಣಾತ್ಮಕ ಚಿಹ್ನೆ(:) :

* ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಈ ಚಿಹ್ನೆಯನ್ನು ಬಳಸಲಾಗುತ್ತದೆ.

* ವಿಷಯಕ್ಕೆ ವಿವರಣೆ ನೀಡಲು ವಿವರಣ ವಿರಾಮ ಚಿಹ್ನೆ ಬಳಕೆಯಾಗುತ್ತದೆ. ಇದು ಪೂರ್ಣವಿರಾಮದಂತೆ ವಾಕ್ಯದ ಕೊನೆಯಲ್ಲಿ ಬಳಕೆಯಾಗುತ್ತದೆ. ಉದಾ: ನಗರ ಜೀವನ ಹಾಳಾಗಲು ಕಾರಣಗಳು: ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಕಾನೂನುಬಾಹಿರವಾಗಿ ನಡೆಯುವ ನಿರ್ಮಾಣಗಳು: ಮುಂತಾದುವು.

* ಕೆಲವು ನಮೂನೆ, ವೈಯಕ್ತಿಕ ವಿವರ ಮುಂತಾದ ಬಳಕೆಯಲ್ಲಿ ವಿವರಣ ವಿರಾಮ ನೀಡಬೇಕು. ಹೆಸರು: ಹುಟ್ಟಿದ ದಿನಾಂಕ: ಸ್ಥಳ: ಸೂಚನೆ:, ಪಂಚ ಮಹಾವಾದ್ಯಗಳು: ತಾಳ, ಹಳಗ, ಗಂಟೆ, ಮೌರಿ, ಸನಾದಿ.

 (ಮುಂದುವರೆಯುವುದು….)

ಮೇಲಿನ ಸಂಗತಿಗಳನ್ನು ಪಿಡಿಎಫ್ ನಲ್ಲಿ ಡೌನ್ಲೋಡ್ ಮಾಡಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ತಲೆಬರಹ:  ಕನ್ನಡ ವ್ಯಾಕರಣ-ಲೇಖನ ಚಿಹ್ನೆಗಳು

ಕಡತದ ಭಾಷೆ : ಕನ್ನಡ

ಇಲಾಖೆ : ಶಿಕ್ಷಣ ಇಲಾಖೆ

ರಾಜ್ಯ: ಕರ್ನಾಟಕ

ಪ್ರಕಟಿಸಿದ ದಿನಾಂಕ : 09-06-2022

ಫೈಲ್ ಫಾರ್ಮ್ಯಾಟ್ : ಪಿಡಿಎಫ್/ಜೆಪಿಜೆ/ಟೆಕ್ಸ್ಟ್

ಫೈಲ್ ಗಾತ್ರ : 1.5ಎಂ.ಬಿ.

ಪುಟಗಳ ಸಂಖ್ಯೆ : 4

ಡೌನ್ಲೋಡ್ ಲಿಂಕ್ : ಇದೆ

ವೆಬ್ಸೈಟ್ ಲಿಂಕ್ : ಇಲ್ಲ

ಸ್ಕ್ಯಾನ್ ಮಾಡಿದ ಪ್ರತಿ : ಅಲ್ಲ

ಸಂಪಾದಿಸಬಹುದಾದ ಪಠ್ಯ : ಇಲ್ಲ

ನಕಲು ಪಠ್ಯ : ಅಲ್ಲ

ಮುದ್ರಣ : ಲಭ್ಯವಿದೆ

ಗುಣಮಟ್ಟ : ಅತ್ಯುತ್ತಮ

ಫೈಲ್ ಗಾತ್ರ ಕಡಿಮೆಯಾಗಿದೆ : ಇಲ್ಲ

ಗುಪ್ತಪದ : ಇಲ್ಲ

ಪಾಸ್ವರ್ಡ್ ಎನ್ಕ್ರಿಪ್ಟ್ : ಇಲ್ಲ

ಇಮೇಜ್ ಫೈಲ್ ಲಭ್ಯತೆ : ಇದೆ

ಫೈಲ್ ನ ವೆಚ್ಚ/ಮೌಲ್ಯ : ಸಂಪೂರ್ಣ ಉಚಿತ

  ಇಲ್ಲಿ ಡೌನ್ಲೋಡ್ ಮಾಡಿ 

Post a Comment

0 Comments