ಅಲಂಕಾರ
ಎಂದರೆ ಸೌಂದರ್ಯವನ್ನು ಹೆಚ್ಚಿಸುವ ಸಾಧನ. ಮಾನವ ತನ್ನ ದೇಹದ ಸೌಂದರ್ಯವನ್ನು ಹೆಚ್ಚಿಸಲು ಅಲಂಕಾರ
ಮಾಡಿಕೊಳ್ಳುವಂತೆ ತಾನು ಆಡುವ ಮಾತಿಗೂ, ರಚಿಸುವ ಸಾಹಿತ್ಯಕ್ಕೂ ಅಲಂಕಾರ ಮಾಡುತ್ತಾನೆ.
ಉದಾ
: 'ಪೂರ್ವ ದಿಕ್ಕಿನಲ್ಲಿ ಸೂರ್ಯ ಮೂಡಿದನು' ಎಂದು ಹೇಳುವ ಬದಲಿಗೆ ಪೂರ್ವದಿಕ್ಕಿನಲ್ಲಿ ಮೂಡಿದ ಸೂರ್ಯನು
ಮುತ್ತೈದೆಯ ಹಣೆಯಲ್ಲಿರುವ ಕುಂಕುಮದಂತೆ ಕಂಡನು ಎಂದು ಹೇಳಿದಾಗ ಮಾತಿನ ಸೌಂದರ್ಯ ಹೆಚ್ಚುತ್ತದೆ.
·
ಅಲಂಕಾರದಲ್ಲಿ
ಶಬ್ದಾಲಂಕಾರ, ಮತ್ತು ಅರ್ಥಾಲಂಕಾರ ಎಂದು 2 ವಿಭಾಗಗಳಿವೆ. ಶಬ್ದ ಅಥವಾ ಪದಗಳ ಜೋಡಣೆಯ ಮೂಲಕ ಕಾವ್ಯ
ಅಥವಾ ಮಾತಿನ ಸೌಂದರ್ಯ ಹೆಚ್ಚಿದರೆ ಅದನ್ನು ಶಬ್ದಾಲಂಕಾರ ಎಂತಲೂ ಹಾಗೂ ಪದಗಳ ಅರ್ಥ ಚಮತ್ಕಾರದಿಂದ
ಕಾವ್ಯದ ಅಥವಾ ಅರ್ಥದ ಸೌಂದರ್ಯ ಹೆಚ್ಚಿದರೆ ಅದನ್ನು ಅರ್ಥಾಲಂಕಾರ ಎಂತಲೂ ಕರೆಯುತ್ತಾರೆ.
ಶಬ್ದಾಲಂಕಾರ
:- ಇದರಲ್ಲಿ ಅನುಪ್ರಾಸ, ಯಮಕ ಮತ್ತು ಚಿತ್ರಕವಿತ್ವ ಎಂದು 3 ವಿಭಾಗಗಳಿವೆ.
1)ಅನುಪ್ರಾಸ:
ಅನುಪ್ರಾಸವನ್ನು
ವೃತ್ತ್ಯನುಪ್ರಾಸ ಮತ್ತು ಛೇಕಾನುಪ್ರಾಸ ಎಂಬುದಾಗಿ ಮತ್ತೆ ವಿಭಾಗಿಸಲಾಗಿದೆ.
ವೃತ್ತ್ಯನುಪ್ರಾಸ
:-
ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಮತ್ತೆ ಮತ್ತೆ ಬಂದರೆ ಅಂದರೆ ಪುನರಾವರ್ತನೆಗೊಂಡರೆ
ಅದನ್ನು ವೃತ್ತ್ಯನುಪ್ರಾಸ ಎಂದು ಕರೆಯುತ್ತಾರೆ.
ಉದಾ
:- ಎಳಗಿಳಿಗಳ ಬಳಗಗಳು ನಳನಳಿಸಿ ಬೆಳೆದ ಕಳವೆಯ ಎಳೆಯ ಕಾಳಿಗೆ ಎಳಸಿ ಬಂದವು.
ಛೇಕಾನುಪ್ರಾಸ :- ಎರಡೆರಡು
ವ್ಯಂಜನಗಳು ಪುನರಾವರ್ತನೆಗೊಂಡರೆ ಅದನ್ನು ಛೇಕಾನುಪ್ರಾಸ ಎನ್ನುತ್ತಾರೆ.
ಉದಾ:-
ಕೆಲದೊಳ್ ಳಿಂದಿಯಿರೆ ಪೆ |
ರ್ಬುಲಿ ಬಂದೊಡಮಂಜನಳ್ಕ ನೋಡಂನೋಡಂ ||
ಚಲದಿಂ ಕಾಡಂಕಾಡಂ |
ಸಲೆ ಪಸಿವಂ ಮರೆದು ತಣಿದು ಬೇಡಂಬೇಡಂ ||
2)
ಯಮಕ :-
ಮೂರು
ಅಥವಾ ಅದಕ್ಕಿಂತ ಹೆಚ್ಚು ಅಕ್ಷರಗಳುಳ್ಳ ಪದವಾಗಲಿ, ಪದಭಾಗವಾಗಲಿ ಒಂದು ಪದ್ಯದ ಆದಿ, ಮಧ್ಯ, ಅಥವಾ
ಅಂತ್ಯದಲ್ಲಿ ನಿಯತವಾಗಿ ಪುನಃ ಪುನಃ ಬಂದರೆ ಅದು ಯಮಕಾಲಂಕಾರವೆನಿಸುವುದು.
ಅಮಳ್ಗಳ್ ನಯವಿಕ್ರಮಗುಣ |
ದಮಳ್ಗಳ್ ನೃಪಶಾಸ್ತ್ರ ಪರಿಣತರವರಂ ||
ಸಮರದೊಳಗಗ್ರ ಶೌರ್ಯಂ |
ಸಮರಸ ಸಂಪನ್ನನಾವನುದಾರನಪ್ಪನ್ ||
3) ಚಿತ್ರಕವಿತ್ವ
:-
ಪ್ರೌಢಪಂಡಿತ
ಕವಿಗಳು ತಮ್ಮ ಬುದ್ಧಿಕೌಶಲದಿಂದ ವೈಚಿತ್ರ್ಯರ್ಣವಾಗಿ ಅಕ್ಷರಗಳನ್ನೂ, ಪದಗಳನ್ನೂ ಜೋಡಿಸಿ ಪದ್ಯರಚಿಸುತ್ತಾರೆ.
ಇದಕ್ಕೆ ಚಿತ್ರಕವಿತ್ವ ಅಥವಾ ಬಂಧ ಎಂದು ಹೆಸರು. ಇದರಲ್ಲಿ ನಿರೋಷ್ಠ್ಯ, ತಾಲವ್ಯ, ಏಕಾಕ್ಷರ, ದ್ವ್ಯಕ್ಷರ,
ತ್ರ್ಯಕ್ಷರ, ಹಾರಬಂಧ, ಮುರಜಬಂಧ ಇತ್ಯಾದಿ ಪ್ರಕಾರಗಳಿವೆ.
*****
ಅರ್ಥಾಲಂಕಾರದ
ಪ್ರಕಾರಗಳು :
1 1) ಉಪಮಾಲಂಕಾರ :
ಈ
ವಾಕ್ಯವನ್ನು ಗಮನಿಸಿ :
ನೀಚರಿಗೆ
ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ
ನೀಚರಿಗೆ
ಉಪಕಾರ ಮಾಡುವುದರಿಂದ ಹೇಗೆ ಪ್ರಯೋಜನವಿಲ್ಲವೋ ಹಾಗೆಯೇ ಹಾವಿಗೆ ಹಾಲೆರೆಯುವುದರಿಂದ ಪ್ರಯೋಜನವಿಲ್ಲ
ಎಂಬುದು ಈ ವಾಕ್ಯದ ಅರ್ಥ. ಇಲ್ಲಿ
ನೀಚರಿಗೆ ಮಾಡುವ ಉಪಕಾರ ಎಂಬುದು ವರ್ಣ್ಯ. (ವರ್ಣಿಸಲ್ಪಡುವ ವಾಕ್ಯ) ಇದನ್ನು ಉಪಮೇಯ ಎಂದು ಕರೆಯಲಾಗಿದೆ. ಹಾವಿಗೆ ಎರೆದ
ಹಾಲು ಅವರ್ಣ್ಯ. (ವರ್ಣಿಸಲು ಆಧಾರ ವಾಗಿರುವ ವಾಕ್ಯ) ಇದನ್ನು ಉಪಮಾನ ಎಂದು ಕರೆಯುತ್ತಾರೆ. ಅಂತೆ ಎಂಬುದು ವಾಚಕ ಪದ ಅಂದರೆ ಉಪಮೇಯಕ್ಕೂ ಉಪಮಾನಕ್ಕೂ
ಇರುವ ಸಂಬಂಧವನ್ನು ಅಂದರೆ ಹೋಲಿಕೆಯ ಸಂಬಂಧವನ್ನು ಸೂಚಿಸುವ ಪದ. ಹೀಗೆ ಎರಡು ವಸ್ತುಗಳಿಗೆ ಪರಸ್ಪರ
ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರವೆನಿಸುತ್ತದೆ.
ಉದಾ:-
ಭೀಮ ದುರ್ಯೋಧನರು ಮದಗಜಗಳಂತೆ ಹೋರಾಡಿದರು.
ಇಲ್ಲಿ
ಭೀಮ ದುರ್ಯೋಧನರ ಹೋರಾಟವು ಮದಗಜಗಳ ಹೋರಾಟದಂತೆ ಇತ್ತು ಎಂದು ವರ್ಣಿಸಲಾಗಿದೆ.
ಉಪಮೇಯ
(ವರ್ಣ್ಯ) : ಭೀಮ ದುರ್ಯೋಧನರು, ಉಪಮಾನ (ಅವರ್ಣ್ಯ) : ಮದಗಜಗಳು
ವಾಚಕ
ಪದ : ಅಂತೆ, ಸಮಾನಧರ್ಮ : ಹೋರಾಟ, ಅಲಂಕಾರ : ಉಪಮಾಲಂಕಾರ
ಸಮನ್ವಯ
: ಉಪಮೇಯವಾದ ಭೀಮದುರ್ಯೋಧನರನ್ನು ಉಪಮಾನವಾದ ಮದಗಜಗಳಿಗೆ ಹೋಲಿಸಲಾಗಿದೆ. ಅಂತೆ ಎಂಬ ವಾಚಕ ಪದವಿದ್ದು
ಹೋರಾಟ ಎಂಬ ಸಮಾನಧರ್ಮ ಇರುವುದರಿಂದ ಇದನ್ನು ಪೂರ್ಣೋಪಮಾಲಂಕಾರ
ಎಂದು ಹೇಳಬಹುದು.
ಉಪಮಾಲಂಕಾರವಾಗಿದ್ದರೂ
ಅದರಲ್ಲಿ ಉಪಮೇಯ, ಉಪಮಾನ, ಸಮಾನ ಧರ್ಮಗಳು ಯಾವುದಾದರೊಂದು ಇರದಿದ್ದರೆ ಅದನ್ನು ಲುಪ್ತೋಪಮಾಲಂಕಾರ
ಎನ್ನುತ್ತೇವೆ.
ಉದಾಹರಣೆ
: ಮರವೇರಿದ ಮರ್ಕಟನಂತೆ, ಉಪಮೇಯ : (ಮನಸ್ಸು) ಲುಪ್ತವಾಗಿದೆ
ಉಪಮಾನ
: ಮರವೇರಿದ ಮರ್ಕಟ, ವಾಚಕಶಬ್ಧ : ಅಂತೆ, ಸಮಾನ ಧರ್ಮ : ಚಂಚಲತೆ
ಸಮನ್ವಯ
: ಉಪಮೇಯ ಲುಪ್ತವಾಗಿದೆ ಇದನ್ನು ಲುಪ್ತೋಮಾಲಂಕಾರ ಎಂದು ಕರೆಯುತ್ತೇವೆ.
* * * * *
2)
ರೂಪಕಾಲಂಕಾರ:
ಅತಿ
ಸಾಮ್ಯದಿಂದಾಗಿ ಉಪಮೇಯ ಉಪಮಾನಗಳಲ್ಲಿ ಅಭೇದವನ್ನು ಹೇಳಿ ವರ್ಣಿಸಿದಾಗ ಅದು
ರೂಪಕಾಲಂಕಾರವಾಗುತ್ತದೆ.
ಉದಾ
: ಅಳ್ಳಿರಿಯುತಿಪ್ಪ ಎಮ್ಮ ಒಡಲಬೇಗೆಯ ಬೆಂಕಿಯುರಿ ನಿನ್ನನಿರಿಯದೆ ಪೇಳು ವಿಶ್ವಾಮಿತ್ರ
ಇಲ್ಲಿ
-ಉಪಮೇಯ - ಒಡಲಬೇಗೆ, ಉಪಮಾನ - ಬೆಂಕಿಯುರಿ, ಅಲಂಕಾರ - ರೂಪಕಾಲಂಕಾರ
ಸಮನ್ವಯ
- ಉಪಮೇಯವಾದ ಅಯೋಧ್ಯೆಯ ಪ್ರಜೆಗಳ ಒಡಲ ಬೇಗೆಯನ್ನು ಉಪಮಾನವಾದ
ಬೆಂಕಿಯ
ಉರಿಗೆ ಅಭೇದವಾಗಿ ರೂಪಿಸಿರುವುದರಿಂದ ಇದು ರೂಪಕಾಲಂಕಾರವಾಗಿದೆ.
*****
3)
ದೃಷ್ಟಾಂತಾಲಂಕಾರ :
ಎರಡು
ಬೇರೆಬೇರೆ ವಾಕ್ಯಗಳಲ್ಲಿ ಅರ್ಥಸಾದೃಶ್ಯದಿಂದ ಬಿಂಬ ಪ್ರತಿಬಿಂಬ ಭಾವವು ತೋರಿಬಂದರೆ ಅದನ್ನು ದೃಷ್ಟಾಂತಾಲಂಕಾರ
ಎನ್ನುವರು.
ಉದಾ
: ಮಾತು ಬಲ್ಲವನಿಗೆ ಜಗಳವಿಲ್ಲ; ಊಟಬಲ್ಲವನಿಗೆ ರೋಗವಿಲ್ಲ.
4) ಉತ್ಪ್ರೇಕ್ಷಾಲಂಕಾರ :
ಉಪಮೇಯವಾದ
ವಸ್ತುವನ್ನು ಅಥವಾ ಸನ್ನಿವೇಶವನ್ನು ಉಪಮಾನವಾದ ವಸ್ತುವನ್ನಾಗಿ ಅಥವಾ ಸನ್ನಿವೇಶವನ್ನಾಗಿ ಕಲ್ಪಿಸುವುದೇ
ಉತ್ಪ್ರೇಕ್ಷಾಲಂಕಾರ.
ಉದಾ
: ಅಚ್ಛೋದ ಸರೋವರವು ತ್ರೈಲೋಕ್ಯಲಕ್ಷ್ಮಿಯು ತನ್ನ ಸೌಂದರ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ
ಎಂಬಂತೆ ಶೋಭಿಸಿತು.
ಉಪಮೇಯ
: ಅಚ್ಛೋದ ಸರೋವರ, ಉಪಮಾನ : ರನ್ನಗನ್ನಡಿ, ಅಲಂಕಾರ : ಉತ್ಪೇಕ್ಷಾಲಂಕಾರ
ಸಮನ್ವಯ
: ಉಪಮೇಯವಾದ ಅಚ್ಛೋದ ಸರೋವರವನ್ನು ಉಪಮಾನವಾದ ರನ್ನಗನ್ನಡಿ ಎಂಬುದಾಗಿ ಕಲ್ಪಿಸಿರುವುದರಿಂದ ಇದು ಉತ್ಪ್ರೇಕ್ಷಾಲಂಕಾರವಾಗಿದೆ.
******
5) ಶ್ಲೇಷಾಲಂಕಾರ:
*
ಒಂದು ಪದವು ಒಂದಕ್ಕಿಂತ ಹೆಚ್ಚು ಅರ್ಥಕೊಡುವಂತಿದ್ದರೆ ಅಂತಹ ಪದಕ್ಕೆ ಶ್ಲೇಷಪದ ಎಂದು ಹೆಸರು. ಇಂತಹ ಶ್ಲೇಷಾರ್ಥಗಳನ್ನು ನೀಡಬಲ್ಲ
ಪದಗಳಿರುವ ಅಲಂಕಾರವನ್ನು ಶ್ಲೇಷಾಲಂಕಾರ ಎಂದು ಕರೆಯುತ್ತಾರೆ.
ಉದಾ
: ಅತಿಶಯ ಪದಾರ್ಥ ನಿಕರ |
ಪ್ರತೀತಿಯಂ
ಪಡೆವ ಪಾದವಿನ್ಯಾಸಂ ಭೂ ||
ನುತಮಾಗದಲ್ತೆನಿರ್ದೋ
|
ಷತೆಯಿಂದಲ್ಲದೆ
ಸಮಂತು ಕವಿಗಂ ರವಿಗಂ ||
ಇಲ್ಲಿ
ಕವಿ ಮತ್ತು ರವಿ ಒಂದೇ ಬಗೆಯ ಪದಗಳಿಂದ ವರ್ಣಿತರಾಗಿದ್ದಾರೆ. ಈ ವರ್ಣನೆಯಲ್ಲಿ ಪದಾರ್ಥ, ಪಾದ, ನಿರ್ದೋಷತೆ
ಎಂಬ ಪದಗಳು ಶ್ಲೇಷಾರ್ಥದಿಂದ ಕೂಡಿವೆ. ಅವನ್ನು ಪರಿಶೀಲಿಸೋಣ.
1.
ಪದಾರ್ಥ - ಪದದ ಅರ್ಥ (ಶಬ್ದಾರ್ಥ) - ವಸ್ತು
2.
ಪಾದ - ಪದ್ಯದ ಸಾಲು - ಕಿರಣ
3. ನಿರ್ದೋಷತೆ - ದೋಷವಿಲ್ಲದಿರುವಿಕೆ - ಕತ್ತಲಿಲ್ಲದಿರುವಿಕೆ
(ಹಗಲು).
3 Comments
ಅದ್ಭುತ 😍😍😍
ReplyDeleteಒಳ್ಳೆಯ ಒಂದು ವಾಕ್ಯವರಣ ಅಂಶವಾಗಿದೆ
ReplyDeleteThank you ,📚📚
Thank you for your valuable feedback guys😊
ReplyDeletePlz support us to give you more useful information for further days. Keep in touch with us.